ಹೊಸಂಗಡಿ
	ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನಲ್ಲಿ ಕುಂದಾಪುರದ ಪೂರ್ವಕ್ಕೆ 42 ಕಿಮೀ ದೂರದಲ್ಲಿರುವ ಗ್ರಾಮ.
	ಹಿಂದೆ ಇದು ಹೊನ್ನೆಯ ಕಂಬಳಿ (ಹೊನ್ನಕಂಬಳಿ) ಎಂಬ ಜೈನವಂಶದ ಪಾಳೆಯಗಾರರ ರಾಜಧಾನಿಯಾಗಿತ್ತು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಏಳು ನಾಡುಗಳನ್ನು ಮತ್ತು ಘಟ್ಟದ ಮೇಲಿನ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳನ್ನು ಆಳಿದರೆಂದು ತಿಳಿದುಬರುತ್ತದೆ. ಇಲ್ಲಿ ಒಂದು ಕೋಟೆ ಇತ್ತು. ವಿಜಯನಗರದ ಅರಸರ ಕಾಲದ ತರುವಾಯ ಈ ಭಾಗ ಕೆಳದಿನಾಯಕರ ವಶಕ್ಕೆ ಬಂತು. ಇಲ್ಲಿಯ ಕೋಟೆಯನ್ನು ಕೆಳದಿ ವೆಂಕಟಪ್ಪನಾಯಕ ದುರಸ್ತುಗೊಳಿಸಿದನಲ್ಲದೆ ಅಲ್ಲಿ ಸೈನ್ಯವನ್ನಿಟ್ಟ. ಈಗ ಇಲ್ಲಿ ಹಳೆಯ ಕೋಟೆಯ ಅವಶೇಷಗಳಿವೆ. ಹೈದರ್ ಅಲಿಯ ಕಾಲದಲ್ಲಿ ಈ ಸ್ಥಳ ಹೈದರ್‍ಗಡವೆಂದು ಹೆಸರಾಯಿತು. ಜನರಲ್ ಮೆಥ್ಯೊಸ್ ಎಂಬ ಬ್ರಿಟಿಷ್ ಸೇನಾಧಿಪತಿ ಮುಂಬಯಿಯಿಂದ ಸಣ್ಣಸೇನೆಯೊಂದಿಗೆ ಕುಂದಾಪುರದಲ್ಲಿ ಇಳಿದು ಅಲ್ಲಿದ್ದ ಟಿಪ್ಪುವಿನ ಸೇನೆಯನ್ನು ಗೆದ್ದು, ಅಲ್ಲಿಂದ ಮುಂದುವರಿದು ಹೊಸಂಗಡಿ ಕೋಟೆಯನ್ನು ಹಿಡಿದ. ಹೈದರ್‍ಗಡ ಕೋಟೆ ಈಗಲೂ ಅಷ್ಟೇನೂ ಜೀರ್ಣವಾಗದೆ ಸುಸ್ಥಿತಿಯಲ್ಲಿದೆ. ಈ ಕೋಟೆಯ ಪೂರ್ವಕ್ಕೆ ಇರುವ ಕೆರೆಯನ್ನು ನೀರಾವರಿಗೆ ಬಳಸಲಾಗಿದೆ. ಕೆರೆಯ ಪೂರ್ವಕ್ಕೆ ಅನೇಕ ಹಳೆಯ ಬಾವಿಗಳು ಮತ್ತು ಮನೆಗಳ ನೆಲಕಟ್ಟುಗಳಿವೆ. ಇಲ್ಲಿನ ವಿರೂಪಾಕ್ಷ ದೇವಾಲಯದಲ್ಲಿ ಅನೇಕ ಶಿಲಾಶಾಸನಗಳಿವೆ. ಇಲ್ಲಿ ಶಾಂತೇಶ್ವರ, ವೆಂಕಟರಮಣ ಮತ್ತು ವಿಠಲ ದೇವಾಲಯಗಳಿವೆ.
	ಈ ಗ್ರಾಮದ ಆಗ್ನೇಯ ಭಾಗದಲ್ಲಿ ವರಾಹಿ ನದಿ ಹರಿಯುತ್ತದೆ. ಕುಂದಾಪುರ-ಹೊಸನಗರ ಸಂಪರ್ಕಿಸುವ ರಸ್ತೆ ಈ ಗ್ರಾಮದ ಮೂಲಕ ಹಾದುಹೋಗುತ್ತದೆ.	 					
		(ಎಮ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ